ಚರಿತ್ರೆಯ ಬೋಧನಕ್ರಮ

ಸಾಮಾಜಿಕ, ರಾಜಕೀಯ, ಆರ್ಥಿಕ ಮತ್ತು ಸಾಂಸ್ಕøತಿಕ ವಿಚಾರಗಳನ್ನು ಒಳಗೊಂಡ ಐತಿಹಾಸಿಕ ವಿಷಯಗಳನ್ನು ಆಸಕ್ತಿಯಿಂದ ಮಕ್ಕಳು ಅರಿತುಕೊಳ್ಳುವಂತೆ ಮಾಡುವುದು ಚರಿತ್ರೆಯ ಬೋಧನೆ ನಿರ್ವಹಿಸಬೇಕಾದ ಕಾರ್ಯ. ಹಿಂದಿನ ಮತ್ತು ಇಂದಿನ ಚರಿತ್ರೆಯ ವ್ಯಾಸಂಗ ನಮ್ಮ ಮುಂದೆ ಎರಡು ವಿಷಯಗಳನ್ನು ಇಡುತ್ತದೆ ; ಅದರಲ್ಲಿ ಒಂದು ಆದರ್ಶ ಜೀವನ ಹೇಗಿದೆ. ಹೇಗಿರಬೇಕು ಎಂಬುದು; ಇನ್ನೊಂದು, ಹಾಗಿಲ್ಲದಲ್ಲಿ ಜೀವನ ಹೇಗೆ ಕೆಡುತ್ತದೆ ಎಂಬುದು. ಒಂದು ಅನುಸರಿಸಬೇಕಾದ ಮೇಲ್ಪಂಕ್ತಿ ; ಇನ್ನೊಂದು ಹೇಗಿರಬಾರದು ಎಂಬ ಎಚ್ಚರಿಕೆ.

ಇತಿಹಾಸಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳನ್ನೂ ಇತಿಹಾಸ ಎಂಬ ಶೀರ್ಷಿಕೆಯ ಅಡಿ ಚರ್ಚಿಸಿದೆ. ಇಲ್ಲಿ ಇತಿಹಾಸ ಅಥವಾ ಚರಿತ್ರೆಯನ್ನು ಬೋಧಿಸುವ ಕ್ರಮಗಳನ್ನು ಕುರಿತು ವಿವೇಚಿಸಲಾಗಿದೆ.

ಉತ್ತಮ ಬೋಧನಕ್ರಮದಿಂದ ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿ ಸಿದ್ಧಿಸಬೇಕು. ಜ್ಞಾಪಕಶಕ್ತಿ, ಆಲೋಚನೆ, ವಿವೇಚನೆ, ಕಲ್ಪನೆ ಈ ಮನಶ್ಯಕ್ತಿಗಳು ಬೆಳೆಯಬೇಕು. ಅದರಲ್ಲಿ ದೇಶಪ್ರೇಮ, ರಾಷ್ಟ್ರೀಯ ಭಾವನೆ, ಪೌರತ್ವದ ತರಬೇತಿ ಮತ್ತು ಜ್ಞಾನ ಇವು ವೃದ್ಧಿಯಾಗಬೇಕು. ಈ ಉದ್ದೇಶದಿಂದ ರೂಪುಗೊಂಡ ಪ್ರಚಾರದಲ್ಲಿರುವ ಮುಖ್ಯ ಬೋಧನಕ್ರಮಗಳನ್ನು ಮುಂದೆ ಪರಿಶೀಲಿಸಿದೆ.

1. ಕಥನಕ್ರಮ : ಮಕ್ಕಳು ಸ್ವಾಭಾವಿಕವಾಗಿ ಕಥೆಗಳನ್ನು ಕೇಳಲು ಇಷ್ಟಪಡುತ್ತಾರೆ. ನಾಯಕ ವ್ಯಕ್ತಿಗಳ ಚರಿತ್ರೆಯನ್ನೂ ಕಥನ ಕ್ರಮದಿಂದ ಜನಜೀವನವನ್ನೂ ಸಾಂಸ್ಕøತಿಕ, ಸಾಮಾಜಿಕ, ರಾಜಕೀಯ, ಆರ್ಥಿಕ ವಿಚಾರಗಳನ್ನೂ ಮಕ್ಕಳಿಗೆ ಸುಲಭಗ್ರಾಹ್ಯವಾಗುವಂತೆ ಮಾಡಬಹುದು. ಅವರ ಮಾನಸಿಕ ಮಟ್ಟಕ್ಕೆ ರುಚಿಸುವಂಥ ಇತಿಹಾಸಕ್ಕೆ ಸಂಬಂಧಪಟ್ಟ ಅಂಶಗಳನ್ನು ಆರಿಸಿಕೊಳ್ಳಬೇಕು. ಆ ವಿಷಯಗಳನ್ನು ಮಕ್ಕಳಿಗೆ ಸ್ಪಷ್ಟವಾಗಿ ತಿಳಿಯುವಂತೆ ಮಾಡಲು ತಕ್ಕ ತಂತ್ರಗಳನ್ನು ಬಳಸಬೇಕು. ಕಥೆಗಳು ಅನೇಕ ಘಟನೆಗಳಿಂದಲೂ ವಿಶೇಷ ವಿಚಾರಗಳಿಂದಲೂ ಕೂಡಿದ್ದರೆ ಕಲಿವಿನಲ್ಲಿ ಮಕ್ಕಳು ಆಸಕ್ತಿ ಕೇಂದ್ರಿಕರಿಸುತ್ತದೆ. ಕಥೆ ಕೇಳುವ ಅವರ ಆಸಕ್ತಿ ವಿಷಯಗ್ರಹಣಕ್ಕೆ ಪ್ರಚೋದಕವಾಗಬೇಕು. ಪ್ರಾಥಮಿಕ ಮಟ್ಟದಲ್ಲಿ ಈ ಕಥನಕ್ರಮ ಬಹು ಉಪಯುಕ್ತವಾದುದು.

2. ಜೀವನಚರಿತ್ರೆಯ ಕ್ರಮ : ಚರಿತ್ರೆಯ ಘಟನೆಗಳು ಮಹಾವ್ಯಕ್ತಿಗಳ ವಿಚಾರವನ್ನು ಒಳಗೊಂಡಿರುತ್ತದೆ. ಅಂಥ ವ್ಯಕ್ತಿಗಳ ಚರಿತ್ರೆ ಅವರ ಕಾಲದ ಸ್ಥಿತಿಗಳನ್ನೂ ಸಂಸ್ಕøತಿ ನಾಗರಿಕತೆಗಳನ್ನೂ ತಿಳಿಸುತ್ತದೆ. ಈ ದೃಷ್ಟಿಯಿಂದ ಜೀವನಚರಿತ್ರೆಯ ಮೂಲಕ ಇತಿಹಾಸಬೋಧನೆ ಮಾಡುವುದು ಒಂದು ಆಕರ್ಷಣೀಯ ಕ್ರಮ. ವ್ಯಕ್ತಿಯ ಕಥೆಯನ್ನು ತಿಳಿಯಲು ಮಕ್ಕಳು ಸಹಜವಾಗಿ ಆಸಕ್ತಿ ತೋರುತ್ತಾರೆ. ಆ ಮೂಲಕ ಮಕ್ಕಳಿಗೆ ಕಲಿವಿನಲ್ಲಿ ಪ್ರೇರಣೆ ಉಂಟಾಗುತ್ತದೆ. ಜೀವನ ಚರಿತ್ರೆಯ ಮೂಲಕವೇ ಅಂದಿನ ಸಮಾಜದ, ಸರ್ಕಾರದ ರೀತಿನೀತಿಗಳು, ಆದರ್ಶಗಳು, ವೈಯಕ್ತಿಕ ಶಕ್ತಿಗಳು ಮನವರಿಕೆಯಾಗುತ್ತವೆ. ಅನೇಕ ವ್ಯಕ್ತಿಗಳ ನೈತಿಕ ವಿಚಾರ ಮತ್ತು ದೇಶಭಕ್ತಿ ಮುಂತಾದವುಗಳ ಬಗ್ಗೆ ಅವರಿಗೆ ಶ್ರದ್ಧೆ ಮೂಡುತ್ತದೆ. ಈ ವಿಧಾನವನ್ನು ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣದ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಬಳಸಬಹುದು.

3. ಉಪನ್ಯಾಸಕ್ರಮ : ಉಪನ್ಯಾಸ ಕ್ರಮ ಬಹಳ ಕಾಲದಿಂದಲೂ ಬಳಕೆಯಲ್ಲಿದೆ. ನುರಿತ ವಿದ್ವಾಂಸನೊಬ್ಬನ ಹಲವಾರು ವರ್ಷಗಳ ವ್ಯಾಸಂಗದ ಫಲ ವಿದ್ಯಾರ್ಥಿಗಳಿಗೆ ಸುಲಭವಾಗಿ ದೊರೆಯುವುದು ಈ ಕ್ರಮದಿಂದಲೇ. ಇತಿಹಾಸದ ಅನೇಕ ಜಟಿಲ ವಿಚಾರಗಳನ್ನು ಅರ್ಥಪೂರ್ಣವಾಗಿ ಪರಿಚಯ ಮಾಡಿಕೊಡಲು ಇದು ಬಹು ಉಪಯುಕ್ತ ವಿಧಾನ. ಒಂದು ವಿಸ್ತಾರವಾದ ವಿಷಯದ ಮುಖ್ಯಾಂಶಗಳನ್ನು ಸಮಗ್ರ ರೀತಿಯಲ್ಲಿ ಪರಿಚಯ ಮಾಡಿಕೊಂಡು ಇದು ನೆರವಾಗುತ್ತದೆ. ಪ್ರೌಢಶಾಲೆ ಮತ್ತು ಕಾಲೇಜುಗಳಲ್ಲಿ ಈ ಕ್ರಮ ಉಪಯುಕ್ತವೆನಿಸಬಲ್ಲುದು. ಶಿಕ್ಷಕರು ತಮ್ಮ ಧ್ವನಿ, ಮುಖಭಾವಗಳು ಮತ್ತು ನಟನೆ ಮುಂತಾದುವುಗಳಿಂದ ಕೇವಲ ಗ್ರಂಥಸ್ಥವಾಗಿರುವ ನೀರಸ ಅಂಶಗಳಿಗೂ ಜೀವ ತುಂಬಿ ವಿಷಯ ನಿರೂಪಿಸಬಹುದು. ಮಕ್ಕಳು ನೇರವಾದ ಸಂಪರ್ಕ ಪಡೆಯಬಹುದು. ಬೋಧನೆಯ ವಿಷಯ ಮಕ್ಕಳ ಅಭಿನಂದನೆಗೆ ಪಾತ್ರವಾಗಿದೆಯೇ ಎಂಬುದನ್ನು ಪರೀಕ್ಷಿಸಬಹುದು. ಹಾಗಲ್ಲದಿದ್ದರೆ ಸೂಕ್ತ ಬದಲಾವಣೆ ಮಾಡಿಕೊಳ್ಳಬಹುದು. ಕೇಳಿ ಕಲಿಯುವ ಮಕ್ಕಳ ಶಕ್ತಿ ಕುದುರುತ್ತದೆ. ಒಳ್ಳೆಯ ಉಪನ್ಯಾಸ ಪ್ರತಿಭಾವಂತ ಮಕ್ಕಳನ್ನು ಉತ್ತಮ ಕಲಿವಿಗೆ ಪ್ರೇರಿಸುತ್ತದೆ.

4. ಚರ್ಚಾಕ್ರಮ : ಸಾಮಾಜಿಕ ಮನೋಭಾವನೆಯಿಂದ ಕೂಡಿದ ಈ ಕ್ರಮ ಸಮಸ್ಯಾಪರಿಹಾರಕ್ಕೆ ಅತ್ಯಂತ ಉಪಯುಕ್ತವಾದುದು. ವ್ಯಕ್ತಿಯ ಅಭಿಪ್ರಾಯ ಸ್ವಾತಂತ್ರ್ಯಕ್ಕೆ ಅವಕಾಶವಿರುತ್ತದೆ. ಸರ್ವಾನುಮತದ ಚರ್ಚೆಯಿಂದ ಒಂದು ಏಕಾಭಿಪ್ರಾಯಕ್ಕೆ ಅವಕಾಶವಾಗುತ್ತದೆ. ಒಂದು ಗುಂಪಿನಲ್ಲಿ ಒಂದು ವಿಷಯ ಹಲವು ರೀತಿಯಲ್ಲಿ ಚರ್ಚಿಸಲ್ಪಡುವುದರಿಂದ ಆಲೋಚನೆಗೂ ವಿಮರ್ಶಾತ್ಮಕ ನಿರ್ಣಯಕ್ಕೂ ಅವಕಾಶವಿರುತ್ತದೆ. ಉಪಯುಕ್ತ ರೀತಿಯಲ್ಲಿ ಚರ್ಚಿಸುವ ವಿರ್ಮಶಾತ್ಮಕ ನಿರ್ಣಯಕ್ಕೂ ಅವಕಾಶವಿರುತ್ತದೆ. ಉಪಯುಕ್ತ ರೀತಿಯಲ್ಲಿ ಚರ್ಚಿಸುವ ಹಾಗೂ ಇತರ ಅಭಿಪ್ರಾಯಗಳನ್ನು ಗೌರವಿಸುವ ಮನೋಭಾವ, ಆಲೋಚನೆಯನ್ನು ಕೆರಳಿಸಿ ಬುದ್ಧಿಶಕ್ತಿಯನ್ನು ಪ್ರಚೋದಿಸುವ ಅವಕಾಶ, ಭಾಷಾಶಕ್ತಿಯ ಅಭಿವೃದ್ಧಿ ಈ ಮುಖ್ಯವಾದ ಸೌಲಭ್ಯಗಳು ಇದರಲ್ಲಿವೆ. ಆದರೆ ಈ ಕ್ರಮ ಯಶಸ್ವಿಯಾಗಿ ಬೇಕಾದರೆ ಚರ್ಚೆಯಲ್ಲಿ ಭಾಗವಹಿಸುವರು ಚರ್ಚೆಯ ವಿಷಯವನ್ನು ಸಂಪೂರ್ಣವಾಗಿ ತಿಳಿದುಕೊಂಡಿರಬೇಕು. ಶಿಕ್ಷಕರು ಮಾರ್ಗದರ್ಶನ ನೀಡಬೇಕು. ಚರ್ಚೆ ಶಿಸ್ತಿನಿಂದ ಕೂಡಿರಬೇಕು ; ಕೇವಲ ಒಬ್ಬನೇ ಚರ್ಚೆಯಲ್ಲಿ ಭಾಗವಹಿಸುವಂತಾಗಬಾರದು. ವ್ಯವಸ್ಥಿತವಾದ ಬೋಧನಕ್ರಮದಿಂದ ಹುಟ್ಟುಕೊಂಡಿರುವ ಅನೇಕ ಸಂದೇಹಗಳು ಇದರಿಂದ ನಿವಾರಣೆಯಾಗಬಲ್ಲವು. ಬೇರೆ ವಿಧಾನಗಳಿಂದ ಆಗಲೆ ಬೋಧನೆಯಾಗಿರುವ ಅಥವಾ ವಿದ್ಯಾರ್ಥಿಗಳು ಸ್ವತಃ ಅಭ್ಯಸಿಸಿಕೊಂಡು ಬಂದಿರುವ ವಿಷಯಗಳನ್ನು ಈ ಕ್ರಮದಿಂದ ಪರಿಣಾಮಕಾರಿಯಾಗಿ ಮನದಟ್ಟು ಮಾಡಿಕೊಡಬಹುದು.

5. ಮೂಲಾಧಾರ ಕ್ರಮ : ಚರಿತ್ರೆಯ ಅಂಶಗಳು ಮಕ್ಕಳ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯಲು ಪರಿಣಾಮಕಾರಿಯಾದ ಕ್ರಮವೆಂದರೆ ಮೂಲಾಧಾರ ಕ್ರಮ ನೋಡದ, ಪರಿಚಯವಲ್ಲದ ಗತಕಾಲದ ವಿಚಾರಗಳನ್ನು ತಿಳಿಯಲು ಮೂಲಾಧಾರಗಳು ಅವಶ್ಯಕ. ಸರ್ಕಾರದ ಕಾಗದಪತ್ರಗಳು, ಶಾಸನಗಳು, ಪತ್ರಗಳು, ಸನ್ನದುಗಳು, ಟಿಪ್ಪಣಿಗಳು ಮುಂತಾದವುಗಳಿಂದ ಚರಿತ್ರೆಯ ವಾಸ್ತವಿಕತೆ ಉಂಟಾಗುತ್ತದೆ. ಘಟನೆಗಳು ಸಹಜವೆಂಬಂತೆ ಕಂಡುಬರುತ್ತವೆ. ಹಿಂದಿನವರು ಬಿಟ್ಟುಹೋದ ಗತಕಾಲದ ಗುರುತುಗಳು ಚರಿತ್ರೆಯ ಘಟನೆಗಳ ಬಗ್ಗೆ ವಿಷಯಗಳನ್ನು ಸಂಗ್ರಹಿಸಿ, ಪರೀಕ್ಷಿಸಿ, ವಿಮರ್ಶಿಸಿ ಚಾರಿತ್ರಿಕ ನಿರ್ಧಾರಕ್ಕೆ ಬರುವುದಕ್ಕೆ ಅನುಕೂಲವಾಗುತ್ತದೆ. ಈ ರೀತಿ ಆಸಕ್ತಿ ಬೆಳೆಸಿಕೊಳ್ಳಲು ಸರಿಯಾದ ಆಲೋಚನೆ, ಕಲ್ಪನೆ, ತುಲನೆ, ವಿಶ್ಲೇಷಣೆ, ನಿರ್ಧಾರ ಮತ್ತು ವಿಮರ್ಶೆ ಮುಂತಾದವನ್ನು ಬೆಳೆಸಿಕೊಳ್ಳಲು ಮೂಲಾಧಾರಗಳು ನೆರವಾಗುತ್ತದೆ. ಆದರೆ ಅಗತ್ಯ ಆಧಾರಗಳನ್ನು ಎಲ್ಲ ಪಾಠಗಳಿಗೂ ಹುಡುಕುವುದು ಕಷ್ಟ. ಇದನ್ನು ಮುಖ್ಯವಾಗಿ ಸಂಶೋಧನೆಯ ವಿದ್ಯಾರ್ಥಿವೃಂದಕ್ಕೆ ವಿಶಿಷ್ಟವಾಗಿ ಬಳಸಬೇಕಾಗುತ್ತದೆ. ಎಲ್ಲ ವಿಷಯಗಳನ್ನೂ ಈ ಕ್ರಮದಿಂದ ಬೋಧಿಸಿ ಆಗುವುದಿಲ್ಲವಾದ್ದರಿಂದ ಒಂದೆರಡು ವಿಷಯಗಳನ್ನು ಈ ಕ್ರಮದಿಂದ ಬೋಧಿಸಿ ವಿದ್ಯಾರ್ಥಿಗಳಲ್ಲಿರುವ ಸಂಶೋಧನ ಕುತೂಹಲವನ್ನು ಕೆರಳಿಸಬಹುದು.

ಇತರ ಕ್ರಮಗಳು : ಇತಿಹಾಸ ಅಧ್ಯಯನದಿಂದ ಮಕ್ಕಳ ವ್ಯಕ್ತಿತ್ವವನ್ನು ರೂಪಿಸುವ ಉದ್ದೇಶದಿಂದ ತಜ್ಞರು ಇನ್ನೂ ಅನೇಕ ಕ್ರಮಗಳನ್ನು ಸೂಚಿಸಿದ್ದಾರೆ. ಅವನ್ನು ಮುಂದೆ ಉಲ್ಲೇಖಿಸಬಹುದು.

1. ಅಭಿನಯ ಕ್ರಮ : ಚರಿತ್ರೆಯ ಕೆಲವು ಘಟನೆಗಳನ್ನು ನಾಟಕೀಯವಾಗಿ ಅಭಿನಯಿಸುವ ಅವಕಾಶ ಕಲ್ಪಿಸಿದರೆ ವಿದ್ಯಾರ್ಥಿಗಳ ಆಸಕ್ತಿ ಕುದುರುತ್ತದೆ. ಆಯಾ ಸನ್ನಿವೇಶಗಳನ್ನು ಹೇಗೋ ಹಾಗೆ ಆಯ ವ್ಯಕ್ತಿಯ ಅಂದಿನ ಮನೋಭಾವವನ್ನು ವಿದ್ಯಾರ್ಥಿ ತನ್ನದನ್ನಾಗಿ ಮಾಡಿಕೊಳ್ಳುವುದು ಅಭಿನಯದಿಂದ ಸಾಧ್ಯ. ಇದು ಚರಿತ್ರೆ ಬೋಧನಕ್ಕೆ ಒಂದು ಪೂರಕ ಕ್ರಮ.

2. ಕಾಲಾನುಗುಣ ವಿಧಾನ : ಚರಿತ್ರೆಯನ್ನು ಕಾಲಕ್ಕನುಗುಣವಾಗಿ ವಿಭಾಗಿಸಿ ಬೋಧಿಸುವುದರಿಂದ ಚಾರಿತ್ರಿಕ ಘಟನೆಗಳ ನೆನಪು ಮಕ್ಕಳ ಮನಸ್ಸಿನಲ್ಲಿ ಅನುಕ್ರಮವಾಗಿಯೂ ಶಾಶ್ವತವಾಗಿಯೂ ಉಳಿಯುತ್ತದೆ.

3. ಉದ್ಯಮ ವಿಧಾನ (ಪ್ರಾಜೆಕ್ಟ್ ವಿಧಾನ) : ಮಕ್ಕಳ ಅನುಭವಶಕ್ತಿಯನ್ನು ವೃದ್ಧಿಗೊಳಿಸಿ ಸಮಾಜ ಜೀವನಕ್ಕೆ ಹೊಂದಿಸಲು ಈ ಉದ್ಯಮ ವಿಧಾನ ಸಹಾಯಕವಾಗಿವೆ. ಮಕ್ಕಳನ್ನು ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿ ರಚನಾತ್ಮಕ ಶಕ್ತಿಯನ್ನು ಬೆಳೆಸಲು ಇದು ಉತ್ತಮ ವಿಧಾನ.

	4. ಸಮಾಜ ವಿಕಸನ ಕ್ರಮ : ಸಮಾಜದ ಸರ್ವತೋಮುಖ ಅಭಿವೃದ್ಧಿಯನ್ನೇ ದೃಷ್ಟಿಯಲ್ಲಿಟ್ಟುಕೊಂಡು ಚರಿತ್ರೆಯನ್ನು ಬೋಧಿಸುವುದೇ ಈ ಕ್ರಮದ ಉದ್ದೇಶ. ಇದರಿಂದ ಇಂದಿನ ಸಂಸ್ಕøತಿ ನಾಗರಿಕತೆಗಳ ನಿರ್ಮಾಣದಲ್ಲಿ ಮಾನವ ವರ್ಗ ನಿರ್ವಹಿಸುವ ಪಾತ್ರ ಪರಿಚಯವಾಗಿ ಹಿಂದಿನವರ ಬಗ್ಗೆ ಗೌರವಾಭಿಮಾನಗಳು ಮಕ್ಕಳಲ್ಲಿ ಮೂಡುತ್ತವೆ.

5. ಡಾಲ್ಟನ್ ಯೋಜನೆ : ಇತಿಹಾಸ ವಿಷಯಕ್ಕೆ ಸಂಬಂಧಪಟ್ಟ ಪುಸ್ತಕ. ಭೂಪಟ, ಚಿತ್ರ ಮುಂತಾದ ಸಲಕರಣೆಗಳನ್ನು ಮಕ್ಕಳಿಗೆ ಕೊಟ್ಟು ಅವರಿಂದಲೇ ವ್ಯಾಸಂಗ ಮಾಡಿಸುವುದು ಈ ಕ್ರಮದ ಅಂತರಾತ್ಮ ದಾಖಲೆಗಳು, ಪುಸ್ತಕಗಳು, ನಕ್ಷೆಗಳು ಮುಂತಾದವುಗಳನ್ನು ಉಪಯೋಗಿಸಿಕೊಂಡು ಚರಿತ್ರೆಯನ್ನು ಅಭ್ಯಾಸ ಮಾಡಬೇಕು. ಇದರಿಂದ ಮಕ್ಕಳಲ್ಲಿ ಸಂಶೋಧನಾತ್ಮಕ ಶಕ್ತಿಯನ್ನೂ ಸ್ವಾವಲಂಬನ ಶಕ್ತಿಯನ್ನೂ ಬೆಳೆಸಬಹುದು. ಆದರೆ ಪ್ರಾಥಮಿಕ ಹಂತದಲ್ಲಿ ಇದನ್ನು ಅನುಷ್ಠಾನಕ್ಕೆ ತರುವುದು ಕಷ್ಟ.

6. ಏಕಕೇಂದ್ರೀಯ ವೃತ್ತ ಯೋಜನೆ : ಚರಿತ್ರೆಯ ಪಠ್ಯಭಾಗದ ಒಂದೊಂದು ವಿಷಯವನ್ನೂ ಬೇರೆ ಬೇರೆ ಹಂತಗಳಲ್ಲಿ ವಿಸ್ತರಿಸಿಕೊಂಡು ಹೋಗುತ್ತ ಬೋಧಿಸುವುದು ಈ ಕ್ರಮದ ಮುಖ್ಯ ಉದ್ದೇಶ. ಪ್ರಾರಂಭದಲ್ಲಿ ವಿಷಯವನ್ನು ಸುಲಭವಾಗಿಯೂ ಕ್ರಮಕ್ರಮವಾಗಿ ಕ್ಲಿಷ್ಟವಿವರಗಳನ್ನು ನೀಡುತ್ತಲೂ ಬೋಧಿಸುವುದು ಈ ಕ್ರಮದ ವೈಶಿಷ್ಟ್ಯ. ಇದನ್ನು ಒಂದು ನಿರ್ದಿಷ್ಟ ಬೊಧನ ಕ್ರಮವೆಂದು ಭಾವಿಸಿದರೂ ನಿಜವಾಗಿ ಇದು ಪಠ್ಯಕ್ರಮದ ಒಂದು ರೀತಿಯ ವ್ಯವಸ್ಥೆ.

7. ಸಾಂಸ್ಕøತಿಕ ಸೋಪಾನ ಕ್ರಮ : ಮಾನವನ ಸಾಂಸ್ಕøತಿಕ ಪ್ರಗತಿಯ ಹಂತಗಳನ್ನು ಚರಿತ್ರೆಯಲ್ಲಿ ಮಕ್ಕಳು ತಿಳಿಯಬೇಕಾದಾಗ ಅವರ ಶೈಕ್ಷಣಿಕ ಮತ್ತು ವಯೋಮಟ್ಟಗಳಿಗೆ ಅನುಸಾರವಾಗಿ ಬೋಧಿಸುವುದು ಸಾಂಸ್ಕøತಿಕ ಸೋಪಾನಕ್ರಮ (ಕಲ್ಚರ್ ಈಪೋಕ್). ಚರಿತ್ರೆ ಮಕ್ಕಳ ಮನಸ್ಸಿನಲ್ಲಿ ವ್ಯವಸ್ಥಿತ ರೂಪದಲ್ಲಿ ಅಷ್ಟು ಚೆನ್ನಾಗಿ ಮೂಡದಿದ್ದರೂ ಈ ಕ್ರಮದಿಂದ ಮಾನವನ ಸಂಸ್ಕøತಿ ಯಾವ ಯಾವ ಕಾಲದಲ್ಲಿ ಯಾವ ಯಾವ ಪ್ರಭಾವಗಳಿಗೆ ಸಿಕ್ಕಿ ಹೇಗೆ ರೂಪುಗೊಂಡಿತೆಂಬ ಅಂಶವನ್ನು ಸ್ಪಷ್ಟಪಡಿಸಬಹುದು.

8. ಪೂರ್ವಾನ್ವಯ ವಿಧಾನ (ರೆಟ್ರಾಸ್ಪೆಕ್ಟಿವ್ ಪ್ಲ್ಯಾನ್) : ಇಂದಿನ ಸಾಮಾಜಿಕ, ಆರ್ಥಿಕ, ರಾಜಕೀಯ, ಧಾರ್ಮಿಕ ಕ್ಷೇತ್ರಗಳಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಕಳೆದು ಹೋದ ಘಟನೆಗಳೊಡನೆ ಸಮನ್ವಯ ಮಾಡಿಕೊಂಡು ಬೋಧಿಸುವುದೇ ಪೂರ್ವಾನ್ವಯ ವಿಧಾನದ ಉದ್ದೇಶ, ಇದರಿಂದ ಮಕ್ಕಳು ಹಿಂದಿನವರ ಸಾಧನೆಗಳನ್ನು ಅರಿಯುವುದರ ಜೊತೆಗೆ ಅವರ ಯತ್ನದಲ್ಲಿನ ಲೋಪದೋಷಗಳ ಪರಿಚಯದಿಂದ ಲಾಭ ಪಡೆಯಬಹುದು.

ಇದಿಷ್ಟೂ ಬೋಧನಕ್ರಮಗಳ ವೈಶಿಷ್ಟ್ಯವನ್ನು ಕುರಿತು ಹೇಳುವ ಮಾತಾಯಿತು. ಇನ್ನು ಸಾಮಾನ್ಯವಾಗಿ ಯಾವ ಕ್ರಮವನ್ನು ಅನುಸರಿಸಿದರೂ ಉಪಾಧ್ಯಾಯ ಕೆಲವು ಸಾಧನಗಳನ್ನೂ ಬಳಸಬಹುದು. ಮಾನವ ಜೀವನವೇ ಚರಿತ್ರೆಯ, ನಡೆದ ಘಟನೆಗಳ ಚಿತ್ರಗಳು, ಭೂಪಟಗಳು, ವಸ್ತುಸಂಗ್ರಹಾಲಯದ ವಸ್ತುಗಳು, ದಾಖಲೆಗಳು, ಶಾಸನಗಳ ಪ್ರದರ್ಶನ, ಚರಿತ್ರೆಗೆ ಸಂಬಂಧಿಸಿದ ಕಾವ್ಯನಾಟಕಾದಿಗಳ ವಾಚನ, ಚಲನಚಿತ್ರ ಪ್ರದರ್ಶನ, ಪ್ರವಾಸ-ಈ ಮೊದಲಾದವು ಯಾವ ಪಾಠಕ್ರಮಕ್ಕೂ ಸಹಕಾರಿಗಳೇ. ಆದ್ದರಿಂದ ಸಾಧ್ಯವಾದಲ್ಲೆಲ್ಲ ಇವನ್ನು ಬಳಸುವುದು ಒಳ್ಳೆಯದು.					(ಎಂ.ಬಿ.ವಿ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ